ಬೆಂಗಳೂರು, 26/09/2016: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆಯು ಬೆಂಗಳೂರಿನ ಪಕ್ಷದ ರಾಜ್ಯದ ಪ್ರಧಾನ ಕಛೇರಿಯಲ್ಲಿ ರಾಜ್ಯಾಧ್ಯಕ್ಷರಾದ ಅಬ್ದುಲ್ ಹನ್ನಾನ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಬ್ದುಲ್ ಹನ್ನಾನ್ ರವರು ಪ್ರಸ್ತುತ ದೇಶದಲ್ಲಿ ದ್ವೇಷದ ರಾಜಕಾರಣ ನಡೆಯುತ್ತಿದೆ. ನಿರ್ದಿಷ್ಟ ಸಮುದಾಯಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿರುವುದು ಗಮನಿಸಿದರೆ ಈ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ದುಷ್ಟ ಶಕ್ತಿಗಳು ಹೊರಟಿರುವುದಂತೆ ಕಾಣುತ್ತಿದೆ. ಇಂತಹ ಸಂದಿಗ್ಧತ ವಾತಾವರಣದಲ್ಲಿ ನಾವು ಬಹಳ ಜವಾಬ್ದಾರಿಯಿಂದ ಇದ್ದು ಜನರ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳವ ನಿಟ್ಟಿನಲ್ಲಿ ಪಕ್ಷವನ್ನು ಮುನ್ನಡೆಸಬೇಕಾಗಿದೆ ಎಂದು ಕರೆ ನೀಡಿದರು.
ಈ ಕೆಳಗಿನ ನಿರ್ಣಯಗಳನ್ನು ರಾಜ್ಯ ಕಾರ್ಯಕಾರಿಣಿ ಸಮಿತಿಯಲ್ಲಿ ಕೈಗೊಳ್ಳಲಾಯಿತು.
1. ಕಾವೇರಿ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯಸರ್ಕಾರ ವಿಶೇಷ ಅಧಿವೇಶನದಲ್ಲಿಸರ್ವಾನುಮತದಿಂದ ಕೈಗೊಂಡಿರುವ ನಿರ್ಣಯವನ್ನು ಎಸ್.ಡಿ.ಪಿ.ಐ ಸ್ವಾಗತಿಸುತ್ತದೆ. ಇದೊಂದು ತಾತ್ಕಾಲಿಕ ಕ್ರಮವಾಗಿದ್ದು ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ನೀರಿನ ಹಂಚಿಕೆ ಸಂಬಂಧ ರಾಷ್ಟ್ರೀಯ ಜಲನೀತಿ ರೂಪಿಸಿಬೇಕೆಂದು ಆಗ್ರಹಿಸಿದೆ.
2. “ಜಾತ್ಯತೀತ ಇಂಡಿಯಾ ಸಮಾವೇಶ” ಎಂಬ ಶೀರ್ಷಿಕೆಯಡಿಯಲ್ಲಿ ರಾಷ್ಟ್ರಮಟ್ಟದಲ್ಲಿ 2016 ಆಕ್ಟೋಬರ್ 2ರಿಂದ 8ರವರೆಗೆ ಅಭಿಯಾನ ಹಮ್ಮಿಕೊಂಡಿದ್ದು ಇದರ ಅಂಗವಾಗಿ ಕರ್ನಾಟಕ ರಾಜ್ಯದ ಜನರಲ್ಲಿ ಜಾತ್ಯತೀತೆ ಕಲ್ಪನೆಯ ಅರಿವು ಮೂಡಿಸುವುದು ಹಾಗೂ ಜಾತ್ಯತೀತ ವ್ಯವಸ್ಥೆಗಟ್ಟಿಗೊಳಿಸುವ ನಿಟ್ಟಿನಲ್ಲಿ ಜನ ಜಾಗೃತಿ ಅಭಿಯಾನವನ್ನು ನಡೆಸಲು ತೀರ್ಮಾನಿಸಲಾಯಿತು.
3. ರಾಜ್ಯದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಯೋಜನೆಗಳು ಅನುಷ್ಠಾನಗೊಳ್ಳಿಸುವುದರಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಹಾಗೂ ಯೋಜನೆಯ ಲಾಭ ಪಡೆಯುವುದರಲ್ಲಿ ಫಲಾನುಭವಿಗಳು ಭ್ರಷ್ಟಾಚಾರದ ಅವ್ಯವಸ್ಥೆಗೆ ಬಲಿಯಾಗಿತ್ತಿರುವುದನ್ನು ಪಕ್ಷ ಬಹಳ ಗಂಭೀರವಾಗಿ ಪರಿಗಣಿಸಿದ್ದು, ಈ ಸಂಬಂಧ ಮುಂದಿನ ದಿನಗಳಲ್ಲಿ ಹೋರಾಟ ರೂಪಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.
ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯದ ಉಸ್ತುವಾರಿ ಇಲ್ಯಾಸ್ ಮಹಮ್ಮದ್ ತುಂಬೆ, ರಾಜ್ಯ ಉಪಾಧ್ಯಕ್ಷರಾದ ದೇವನೂರು ಪುಟ್ಟನಂಜಯ್ಯ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅಬ್ದುಲ್ ಲತೀಫ್ ಮತ್ತು ಅಬ್ದುಲ್ ಮಜೀದ್, ರಾಜ್ಯ ಸಮಿತಿ ಸದಸ್ಯರುಗಳು ಹಾಗೂ ರಾಜ್ಯದ ಜಿಲ್ಲಾಧ್ಯಕ್ಷರುಗಳು ಪಾಲ್ಗೊಂಡಿದ್ದರು.
No Comments