`ದಕ್ಷ ಐಎಎಸ್ ಅಧಿಕಾರಿ ಡಿ.ಕೆ ರವಿ ನಿಗೂಡ ಸಾವು: ಸಿಬಿಐ ತನಿಖೆಗೆ ಎಸ್‍ಡಿಪಿಐ ಆಗ್ರಹ 

ಬೆಂಗಳೂರು. ಮಾ, 17: ದಕ್ಷ, ಪ್ರಾಮಾಣಿಕ ಹಾಗೂ ನಿಷ್ಠಾವಂತ ಐಎಎಸ್ ಅಧಿಕಾರಿ, ವಾಣಿಜ್ಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಡಿ.ಕೆ ರವಿ ಯವರ ನಿಗೂಢ ಸಾವು ‘ರಾಜ್ಯವು ಓರ್ವ ನಿಷ್ಠಾವಂತ ಐಎಎಸ್ ಅಧಿಕಾರಿಯನ್ನು ಕಳೆದುಕೊಂಡಿದೆ’ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ಕರ್ನಾಟಕ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಕೊಡ್ಲಿಪೇಟೆ ದುಃಖ ವ್ಯಕ್ತಪಡಿಸಿದ್ದಾರೆ.

 

ತನ್ನ ಅಧಿಕಾರವಧಿಯಲ್ಲಿ ಮರಳು ಮಾಫಿಯಾ, ಸರಕಾರಿ ಭೂಮಿ ಕಬಳಿಸುವಿಕೆ ಹಾಗೂ  ತೆರಿಗೆ ಕಳ್ಳರ ವಿರುದ್ದ ಸಮರವನ್ನೇ ಸಾರಿ, ದಮನಿತರ, ದಲಿತರ, ಹಿಂದುಳಿದವರ ಮತ್ತು ತುಳಿತಕ್ಕೊಳಗಾದವರ ಪರ ನಿಷ್ಠಾವಂತತೆಯಿಂದ ಧ್ವನಿಯನ್ನೆತ್ತಿ ಓರ್ವ ದಕ್ಷ ಮತ್ತು ಪ್ರಮಾಣಿಕ ಅಧಿಕಾರಿಯಾಗಿ ಬಡಜನತೆಯ ಮನಸ್ಸಿನಲ್ಲಿ ಸ್ಥಾನವನ್ನು ಪಡೆದಿದ್ದರು. ಓರ್ವ ಧೀಮಂತ, ದಿಟ್ಟ ಕೆಚ್ಚೆದೆಯ ನಾಯಕನಾಗಿ ತನ್ನ ಜವಾಬ್ದಾರಿಯನ್ನರಿತು ಕೆಲಸ ನಿರ್ವಹಿಸಿದ್ದರು. ಡಿ.ಕೆ ರವಿ ಯವರ ನಿಧನವು ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದ್ದು, ಇವರ ನಿಗೂಢ ಸಾವಿನ ಹಿಂದೆ ಅನುಮಾನಗಳಿವೆ. ಆದ್ದರಿಂದ ಸರಕಾರ ಅತೀ ಶೀಘ್ರವಾಗಿ ಸಿಬಿಐ ತನಿಖೆಯನ್ನು ಕೈಗೊಂಡು ಸಾವಿನ ನೈಜತೆಯನ್ನು ಜನತೆಯ ಮುಂದಿಡಬೇಕೆಂದು ಎಸ್.ಡಿ.ಪಿ.ಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಕೊಡ್ಲಿಪೇಟೆ ಸರಕಾರವನ್ನು ಒತ್ತಾಯಿಸಿದ್ದಾರೆ.