ಅಮಾಯಕ ಯುವಕನ ಹತ್ಯೆ ಮತ್ತು ಗಂಭೀರ ಹಲ್ಲೆ: ನೈಜ ಅಪರಾಧಿಗಳನ್ನು ಬಂಧಿಸಿದ ಪೋಲಿಸರ ಕಾರ್ಯಕ್ಕೆ ಎಸ್.ಡಿ.ಪಿ.ಐ ಶ್ಲಾಘನೆ

ಬೆಂಗಳೂರು, ಅ.10: ಇತ್ತೀಚೆಗೆ ಬಂಟ್ವಾಳ ತಾಲೂಕಿನ ಹಾಲಾಡಿಯಲ್ಲಿ ನಡೆದ ಅಮಾಯಕ ಯುವಕನ ಕೊಲೆ ಹಾಗೂ ಯುವಕನ ಮೇಲೆ ಗಂಭೀರ ಹಲ್ಲೆ ನಡೆಸಿ ಪರಾರಿಯಾಗಿದ್ದ ಸಂಘಪರಿವಾರದ ಕಾರ್ಯಕರ್ತರನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೋಲಿಸ್ ಇಲಾಖೆಯ ಕಾರ್ಯಕ್ಕೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೊಡಾಜೆ ಶ್ಲಾಘಿಸಿದ್ದಾರೆ.
ಬೆಂಗಳೂರಿನ ಬಿ.ಬಿ.ಎಂ.ಪಿ ಚುನಾವಣೆಯಲ್ಲಿ ತನ್ನ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ತೊಡಗಿಸಿಕೊಂಡು, ಮಾಧ್ಯಮದೊಂದಿಗೆ ಮಾತನಾಡುತ್ತಾ, ದಕ್ಷಿಣ ಕನ್ನಡ ಜಿಲ್ಲಾ ಪೋಲಿಸ್ ಇಲಾಖೆಯನ್ನು ಅಭಿನಂದಿಸಿ, ಅಮಾಯಕ ಯುವಕನ ಹತ್ಯೆ ಮತ್ತು ಹಲ್ಲೆಯನ್ನು ಖಂಡಿಸಿದ್ದಾರೆ. 
ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಮಿತಿಮೀರುತ್ತಿರುವ ಸಂಘಪರಿವಾರಿಗಳ ಅಟ್ಟಹಾಸವನ್ನು ಹದ್ದು ಬಸ್ಥಿನಲ್ಲಿಡುವಂತೆ ಪೋಲಿಸ್ ಇಲಾಖೆಯೊಂದಿಗೆ ವಿನಂತಿಸಿ, ಸಾಮಾಜಿಕ ಜಾಲ ತಾಣದ ಮೂಲಕ ಇತರ ಧರ್ಮಗಳನ್ನು ಅವಹೇಳಿಸಿ ಕೋಮುವಾದಕ್ಕೆ ತುಪ್ಪ ಸುರಿಯುತ್ತಿರುವುದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದರ ಬಗ್ಗೆ ಗಂಭೀರವಾಗಿ ಪೋಲಿಸ್ ಇಲಾಖೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಈ ಸಂದರ್ಭ ಜಿಲ್ಲಾ ಪ್ರಧಾನ ಕಾರ್ಯದರ್ಶಿ  ನವಾಝ್ ಉಳ್ಳಾಲ್, ಜಿಲ್ಲಾ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ, ಅನ್ವರ್ ಸಾದಾತ್ ಬಜತ್ತೂರು, ರಾಜ್ಯ ಸಮಿತಿ ಸದಸ್ಯರಾದ ಎಂ.ಕೂಸಪ್ಪ, ಅನ್ವರ್ ಸಾದಾತ್ ಉಪಸ್ಥಿತರಿದ್ದರು.