01 Dec 2016 Bangalore: ಈ ಅಭಿಯಾನದ ಅಂಗವಾಗಿ ರಾಜ್ಯ ಮಟ್ಟದ 1 ದಿವಸದ ಉಪವಾಸ ಸತ್ಯಾಗ್ರಹವನ್ನು ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ದಿನಾಂಕ 03/12/2016 ರಂದು ಮಾಡಲಾಗಿರುತ್ತದೆ. ಈ ಸಭೆಯ ಪ್ರಾಸ್ತವಿಕ ನುಡಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್‍ರವರು ಮಾತನಾಡುತ್ತಾ “ಅಲ್ಪಸಂಖ್ಯಾತ ವಿವಿಧ ಸಮುದಾಯಗಳ ಬುದುಕು ಸಮಸ್ಯೆಗಳ ತಾಣವಾಗಿದೆ. ಅಲ್ಪಸಂಖ್ಯಾತರ ನ್ಯಾಯಯುತ ಬೇಡಿಕೆಗಳಿಗೆ ವಿವಿಧ ಹೋರಾಟಗಳ ಮೂಲಕ ಸರ್ಕಾರವನ್ನು ಎಚ್ಚರಿಸುತ್ತಿದ್ದೇವೆ. ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ನಮ್ಮ ಪಕ್ಷವು ಎಲ್ಲಾ ರೀತಿಯ ತ್ಯಾಗಗಳಿಗೆ ಸಿದ್ಧವಿದೆ ಎಂಬ ಮಾಹಿತಿಯನ್ನು ನಾವು ಸರ್ಕಾರಕ್ಕೆ ಈ ಸಂದರ್ಭದಲ್ಲಿ ನೀಡುತ್ತಿದ್ದೇವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವೈಫಲ್ಯತೆಗಳನ್ನು ಜನರಲ್ಲಿ ತಲುಪಿಸುವ ಮೂಲಕ ಕರ್ನಾಟಕ ರಾಜ್ಯದಲ್ಲಿ ಶೋಷಿತರ ಪರವಾದ ಪರ್ಯಾಯ ರಾಜಕೀಯ ವ್ಯವಸ್ಥೆಯನ್ನು ಎಸ್.ಡಿ.ಪಿ.ಐ ಪಕ್ಷವು ಕಟ್ಟುತ್ತಿದೆ” ಎಂದರು.

ಕಾರ್ಯಕ್ರಮದಲ್ಲಿ ಟಿಪ್ಪು ಯುನೈಟೆಡ್ ಫ್ರಂಟ್‍ನ ಅಧ್ಯಕ್ಷರಾದ ಸರ್ದಾರ್ ಅಹಮದ್ ಖುರೈಶಿರವರು ಮಾತನಾಡುತ್ತಾ “2013ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ಮುಸ್ಲಿಂ ಸಮುದಾಯಕ್ಕೆ ಬಹಳ ಆಶ್ವಾಸನೆಗಳನ್ನು ನೀಡುತ್ತಾ ಅಧಿಕಾರದ ಚುಕ್ಕಾಣಿಯನ್ನು ಹಿಡಿಯುವಲ್ಲಿ ಯಶಸ್ವಿಯಾಯಿತು. ಆದರೆ ಅಧಿಕಾರಕ್ಕೆ ಬಂದ ನಂತರ ಇದೇ ಕಾಂಗ್ರೆಸ್ ಸರ್ಕಾರ ಮುಸ್ಲಿಂ ಹಾಗೂ ಅಲ್ಪಸಂಖ್ಯಾತರಿಗೆ ನೀಡಿದ ಆಶ್ವಾಸನೆಗಳನ್ನು ಈಡೇರಿಸದೆ ಸಮುದಾಯಗಳನ್ನು ಮೋಸಮಾಡಿದೆ. ಯಾವುದೇ ಪಕ್ಷದ ಮುಸ್ಲಿಂ ಶಾಸಕರು ಸಹ ವಿಧಾನ ಸೌದದಲ್ಲಿ ಅವರ ಸಮುದಾಯದ ಸಂಬಂಧ ಅಗುತ್ತಿರುವ ಅನ್ಯಾಯ ಹಾಗೂ ಹಕ್ಕುಗಳ ಬಗ್ಗೆ ಮಾತನಾಡಲು ಅವರಿಗೆ ಆಸಕ್ತಿಯೂ ಸಹಾ ಇಲ್ಲ ಎಂಬುದನ್ನು ನಾವು ಕಂಡಿದ್ದೇವೆ. ಆದುದರಿಂದ ಇಂತಹ ಮೋಸಗಾರರನ್ನು ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠವನ್ನು ಮುಸ್ಲಿಂ ಸಮುದಾಯವು ನೀಡಬೇಕು” ಎಂದು ಕರೆ ನೀಡಿದರು.

ವಿಚಾರವಾದಿ ಹಾಗೂ ಲೇಖಕರಾದ ಯೋಗೆಶ್ ಮಾಸ್ಟರ್‍ರವರು “ಮುಸ್ಲಿಂ ಸಮುದಾಯದಲ್ಲಿ ರಾಜಕೀಯವಾಗಿ ಜಾಗೃತಿ ಮೂಡಿಸಲು ಹಾಗೂ ಅಲ್ಪಸಂಖ್ಯಾತ ಹಕ್ಕುಗಳಿಗಾಗಿ ಹೋರಾಟವನ್ನು ಪ್ರಾರಂಭಿಸಿರುವುದು ಸ್ವಾಗತರ್ಹ ಇದಕ್ಕೆ ನಾನು ಎಸ್.ಡಿ.ಪಿ.ಐ ಪಕ್ಷಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಅಲ್ಪಸಂಖ್ಯಾತರಲ್ಲಿ ರಾಜಕೀಯ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಇಂತಹ ಹೋರಾಟಗಳನ್ನು ಮತ್ತಷ್ಟು ಹಮ್ಮಿಕೊಳ್ಳಬೇಕೆಂದು ನಾನು ಎಸ್.ಡಿ.ಪಿ.ಐ ಪಕ್ಷದ ನಾಯಕರಲ್ಲಿ ವಿನಂತಿಸಿಕೊಳ್ಳುತ್ತೇನೆ” ಎಂದರು.

ಮುತ್ತಾಹಿಝ್ ಮಹಾಝ್‍ನ ಪ್ರಧಾನ ಕಾರ್ಯದರ್ಶಿಗಳಾದ ಸೈಯದ್ ಇಖ್ಬಾಲ್ ಸಾಬ್‍ರವರು “ಅಲ್ಪಸಂಖ್ಯಾತ ಸಮುದಾಯ ಇದರಲ್ಲಿ ಮುಖ್ಯವಾಗಿ ಮುಸ್ಲಿಮರ ಹಕ್ಕುಗಳಿಗಾಗಿ ಇಂತಹ ಹೋರಾಟಗಳ ಅನಿವಾರ್ಯತೆ ಇತ್ತು. ಇದು ಇಂದಿನ ಅನಿವಾರ್ಯತೆಯೂ ಸಹ. ಕೇವಲ ಟಿಪ್ಪು ಜಯಂತಿ ಆಚರಣೆಯಿಂದ ಮುಸ್ಲಿಮರ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ. ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸುವುದರ ಮೂಲಕ ಸಮುದಾಯಗಳಿಗೆ ಪರಿಹಾರ ಒದಗಿಸಬೇಕು” ಎಂದು ಒತ್ತಾಯಿಸಿದರು.

ದಲಿತ ಸಂಘರ್ಷ ಸಮಿತಿಯ (ಭೀಮವಾದ) ರಾಜ್ಯಾಧ್ಯಕ್ಷರಾದ ಮೋಹನ್ ರಾಜ್‍ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ “ಹೋರಾಟಗಳು ಈ ಸಮಾಜಕ್ಕೆ ಬೇಕು, ಆದರೆ ಕೇವಲ ಹೋರಾಟಗಳಿಂದ ಶೋಷಿತ ಸಮುದಾಯಗಳಿಗೆ ನ್ಯಾಯ ಸಿಗುವುದು ಕಷ್ಟಸಾಧ್ಯ. ಎಲ್ಲಿಯವರೆಗೆ ನಾವು ಆಡಳಿತದ ಚುಕ್ಕಾಣಿಯನ್ನು ಪಡೆಯುವುದಿಲ್ಲವೊ ಅಲ್ಲಿಯವರೆಗೆ ನಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ನಮ್ಮಿಂದ ಸಾಧ್ಯವಾಗುವುದಿಲ್ಲ. ಈ ಸಂಬಂಧ ರಾಜ್ಯದಲ್ಲಿ ಒಂದು ಪರ್ಯಾಯ ರಾಜಕೀಯ ವ್ಯವಸ್ಥೆಯ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಅಹಿಂದ ರಾಜಕಾರಣ ಮಾಡಬೇಕಿದೆ. ಅಲ್ಪಸಂಖ್ಯಾತರ ಮನೆ ಮಾತಾಗಿರುವ ಎಸ್.ಡಿ.ಪಿ.ಐ ಪಕ್ಷವು ಸಹಾ ಈ ಸಂಬಂಧ ಗಂಭೀರವಾಗಿ ಆಲೋಚಿಸಬೇಕಾಗಿದೆ. ಪ್ರಸಕ್ತ ಎಲ್ಲಾ ರಾಜಕೀಯ ಪಕ್ಷಗಳು ಮುಸ್ಲಿಂ ಸಮುದಾಯವನ್ನು ಕೇವಲ ವೋಟ್ ಬ್ಯಾಂಕ್ ರಾಜಕಾರಣಕ್ಕೆ ಉಪಯೋಗಿಸುತ್ತಿದ್ದಾರೆ. ಈ ಸಂಪ್ರಾದಯಕ್ಕೆ ಕೇವಲ ಮುಸ್ಲಿಮರೇ ಕಾರಣರು ಇದನ್ನು ತಡೆಯಲು ಕೇವಲ ಮುಸ್ಲಿಮರು ಇಚ್ಛಿಸಿದರೆ ಮಾತ್ರ ಸಾಧ್ಯ” ಎಂದರು.

ಜೆ.ಡಿ.ಎಸ್ ಅಲ್ಪಸಂಖ್ಯಾತ ವಿಭಾಗದ ರಾಜ್ಯಾಧ್ಯಕ್ಷರಾದ ಷಫೀ ವುಲ್ಲಾರವರು “ಭಾರತದ ಸ್ವಾತಂತ್ರ್ಯ ಮತ್ತು ಸ್ವಾತಂತ್ರ್ಯ ಭಾರತದ ಅಭಿವೃದ್ಧಿಯಲ್ಲಿ ಮಹತ್ತರವಾದ ಪಾತ್ರ ನಿರ್ವಹಿಸಿದ ಮುಸ್ಲಿಂ ಸಮುದಾಯದ ಸ್ಥಿತಿಗತಿ ಹೀನಾಯವಾಗಿರುವುದಕ್ಕೆ ನಮ್ಮನ್ನು ಆಳಿದ ಸರ್ಕಾರಗಳೇ ಕಾರಣ. ಮುಸ್ಲಿಮರ ಸ್ಥಿತಿಗತಿ ಇಂದು ಬಹಳ ಹೀನಾಯ ಮಟ್ಟಕ್ಕೆ ತಲುಪಿದೆ. ಸಾಚಾರ್ ಮತ್ತು ರಂಗನಾಥ್ ಮಿಶ್ರಾ ವರದಿಯ ಶಿಫಾರಸ್ಸುಗಳು ಅನುಷ್ಟಾನ ಮಾಡುವುದು ಸರ್ಕಾರದ ಜವಾಬ್ದಾರಿ. ಇದನ್ನು ಅನುಷ್ಟಾನ ಮಾಡುತ್ತೇವೆ ಎಂದು ಮುಸ್ಲಿಮರ ಸಮುದಾಯ್ಕಕೆ ದ್ರೋಹ ಮಾಡಿರುವ ಸರ್ಕಾರಗಳ ವಿರುಧ್ಧ ಎಸ್.ಡಿ.ಪಿ.ಐ ಪಕ್ಷವು ಹೋರಾಟವನ್ನು ಪ್ರಾರಂಭಿಸಿರುವುದ ಅಭಿನಂದನೆಯ ಪಾತ್ರ ಹಾಗೂ ಈ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲ ಇರುತ್ತದೆ” ಎಂಬ ಬದ್ಧತೆಯನ್ನು ನೀಡಿದರು.

ಬೆಂಗಳೂರಿನ ಸಿಟಿ ಜಾಮೀಯ ಮಸ್ಜಿದ್‍ನ ಇಮಾಮ್ ಖತೀಬ್ ಮೌಲಾನಾ ಮಸೂದ್ ಇಮ್ರಾನ್‍ರವರು ಮಾತನಾಡುತ್ತ “ಮುಸ್ಲಿಮರ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಕರ್ನಾಟಕ ರಾಜ್ಯದಲ್ಲಿ ಎಸ್.ಡಿ.ಪಿ.ಐ ಮುಸ್ಲಿಂ ಯುವಕರಲ್ಲಿ ಕಾನೂನಾತ್ಮಕ ಚಳುವಳಿಗಳ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ಅಭಿನಂದನಾರ್ಹ. ಹಕ್ಕುಗಳು, ಸೌಲಭ್ಯಗಳು ದೊರೆಯುತ್ತಿಲ್ಲ ಎಂದು ಸುಮ್ಮನೆ ಕೂತರೆ ಫಲ ಸಿಗುವುದಿಲ್ಲ. ಅದನ್ನು ನಾವು ಪಡೆಯಲು ಇಂತಹ ಹೋರಾಟಗಳಲ್ಲಿ ಪಾಲುಗೊಳ್ಳಬೇಕು” ಎಂದು ಉಪವಾಸ ಸತ್ಯಾಗ್ರಹದಲ್ಲಿದ್ದ ಪ್ರತಿಭಟನಕಾರರಲ್ಲಿ ಆಗ್ರಹಿಸಿದರು.

ಸಮಾರೋಪ ಭಾಷಣದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್.ಡಿ.ಪಿ.ಐ ಪಕ್ಷದ ರಾಜ್ಯಾಧ್ಯಕ್ಷರಾದ ಅಬ್ದುಲ್ ಹನ್ನಾನ್‍ರವರು “ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಕಳೆದ ನವೆಂಬರ್ ತಿಂಗಳಿನಲ್ಲಿ ರಾಜ್ಯದಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಜನ ಜಾಗೃತಿ ಮೂಡಿಸಿ ಜಿಲ್ಲಾ ಕೇಂದ್ರಗಳಲ್ಲಿ ಉಪವಾಸ ಸತ್ಯಾಗ್ರಹಗಳನ್ನು ಮಾಡಿ ಇಂದು ಇಲ್ಲಿ ಈ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೇವೆ. ಇಂದಿನ ಈ ಪ್ರತಿಭಟನೆಯು ನಮ್ಮ ಹೋರಾಟದ ಸಮಾರೋಪವಲ್ಲ. ಇಲ್ಲಿಂದ ನಮ್ಮ ಹೋರಾಟವು ಪ್ರ ಾರಂಭವಾಗಿದೆ. ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಮುಂದಿನ ದಿನಗಳಲ್ಲಿ ಮತ್ತಷ್ಟು ಹೋರಾಟಗಳನ್ನು ರೂಪಿಸಲಾಗುವುದು. ಮುಂದಿನ ಬಜೆಟ್‍ನಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಕನಿಷ್ಟ 10 ಸಾವಿರ ಕೋಟಿ ಅನುದಾನವನ್ನು ಮೀಸಲಿಡಬೇಕು. ಅಲ್ಪಸಂಖ್ಯಾತರ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಸರ್ಕಾರಗಳು ಯೋಜನೆಗಳನ್ನು ರೂಪಿಸಬೇಕು. ಆ ಎಲ್ಲಾ ಯೋಜನೆಗಳ ಅನುಷ್ಟಾನಕ್ಕಾಗಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು” ಎಂದು ಸರ್ಕಾರಗಳಿಗೆ ಒತ್ತಾಯಿಸಿದರು..

ಕಾರ್ಯಕ್ರಮದ ನಿರೂಪಣೆಯನ್ನು ಪಕ್ಷದ ರಾಜ್ಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ, ಸ್ವಾಗತ ಭಾಷಣವನ್ನು ರಾಜ್ಯ ಕಾರ್ಯದರ್ಶಿ ಅಲ್ಫಾನ್ಸೊ ಫ್ರಾಂಕೊ ಮತ್ತು ವಂದರ್ನಾಪಣೆಯನ್ನು ರಾಜ್ಯ ಕಾರ್ಯದರ್ಶಿ ಅಫ್ಸರ್ ಕೆ.ರವರು ಮಾಡಿದರು. ಕಾರ್ಯಕ್ರಮದಲ್ಲಿ, ಎಸ್.ಡಿ.ಪಿ.ಐ ರಾಷ್ಟ್ರೀಯ ಉಪಾಧ್ಯಕ್ಷೆ ನಾಝ್ನೀನ್ ಬೇಗಂ, ರಾಷ್ಟ್ರೀಯ ಸಮಿತಿ ಸದಸ್ಯರು ಹಾಗೂ ನಿಕಟಪೂರ್ವ ರಾಜ್ಯಾಧ್ಯಕ್ಷರು ಮೆಹಬೂಬ್ ಶರೀಫ್, ಎಸ್.ಡಿ.ಪಿ.ಐ ರಾಜ್ಯ ಉಪಾಧ್ಯಕ್ಷರು ದೇವನೂರು ಪುಟ್ಟನಂಜ್ಯಯ್ಯ, ಬೆಂಗಳೂರು ಜಿಲ್ಲಾಧ್ಯಕ್ಷರು ಫಯಾಝ್ ಅಹಮದ್, ಬಿ.ಬಿ.ಎಂ.ಪಿ ಸದಸ್ಯರು ಮುಜಾಹಿದ್ ಪಾಶಾ, ವುಮೆನ್ ಇಂಡಿಯಾ ಮೂಮೆಂಟ್‍ನ ರಾಜ್ಯಾಧ್ಯಕ್ಷೆ ಫಸೀಹಾ ಖಾನ್, ಎಸ್.ಡಿ.ಟಿ.ಯು ರಾಜ್ಯಾಧ್ಯಕ್ಷರಾದ ಅಬ್ದುಲ್ ಜಲೀಲ್ ಕೆ, ವುಮೆನ್ ಇಂಡಿಯಾ ಮೂಮೆಂಟ್‍ನ ರಾಜ್ಯ ಪ್ರಧಾನ ಕಾರ್ಯದರ್ಶಿ ಆಯಿಷಾ ಬಜ್ಪೆ, ಕಾಂಪಸ್ ಫ್ರಂಟ್ ಆಫ್ ಇಂಡಿಯಾದ ಮುಖಂಡರು ಸುಫಿಯಾನ್ ಮಡಿಕೇರಿ ಹಾಗೂ ವಿವಿದ ಸಂಘಟನೆಗಳ ಮುಖಂಡರು ಮತ್ತು ಪಕ್ಷದ ಸಾವಿರಾರು ಮಂದಿ ಕಾರ್ಯಕರ್ತರು ಹಾಗೂ ಹಿತೈಷಿಗಳ ಭಾಗವಹಿಸಿದ್ದರು.