ಕಾನೂನುಬಾಹಿರವಾಗಿ ಕಾರ್ಮಿಕರನ್ನು ಮ್ಯಾನ್‍ಹೋಲ್‍ಗೆ ಇಳಿಸಿದ ಗುತ್ತಿಗೆದಾರನ ಮೇಲೆ ಕ್ರಿಮಿನಲ್ ಮೊಕದ್ದಮೆ ಹೊಡಿ – ರಿಯಾಝ್ ಫರಂಗಿಪೇಟೆ

ಸುಪ್ರೀಂ ಕೋರ್ಟ್ ನಿರ್ದೇಶನ ಉಲ್ಲಂಘನೆ, ಮ್ಯಾನ್‍ಹೋಲ್‍ಗೆ ಮೂರು ಕಾರ್ಮಿಕರು ಬಲಿ – ಎಸ್.ಡಿ.ಪಿ.ಐ ಖಂಡನೆ

ಬೆಂಗಳೂರು, ಮಾ-08: ಬೆಂಗಳೂರಿನ ಸಿ.ವಿ ರಾಮನ್‍ನಗರದಲ್ಲಿ ಸೋಮವಾರ ಮಧ್ಯರಾತ್ರಿ ಮ್ಯಾನ್‍ಹೋಲ್‍ನಿಂದ ಕೊಳಚೆ ನೀರು ಹರಿಯುತ್ತಿದನ್ನು ರಿಪೇರಿ ಮಾಡಲು ಮ್ಯಾನ್‍ಹೋಲ್‍ಗೆ ಇಳಿದ ಆಂಧ್ರ ಪ್ರದೇಶ ಮೂಲದ ಎರ್ರಯ್ಯ, ಧಾವತಿ ನಾಯ್ಡು ಹಾಗೂ ಅವರ ರಕ್ಷಣೆಗೆ ಮುಂದಾದ ಮೇಲ್ವಿಚಾರಕ ಆಂಜನೇಯ ರೆಡ್ಡಿ ಉಸಿರುಗಟ್ಟಿ ಮೃತರಾಗಿರುವುದು ಅತ್ಯಂತ ಗಂಭೀರ ವಿಷಯವಾಗಿದೆ. ಸುಪ್ರೀಂ ಕೋರ್ಟಿನ ಸ್ಪಷ್ಟ ನಿರ್ದೇಶನ ಇದ್ದರೂ ಸಹ ಕಾನೂನುಬಾಹಿರವಾಗಿ ಮನುಷ್ಯರನ್ನು ಮ್ಯಾನ್‍ಹೋಲ್‍ಗೆ ಇಳಿಸಿದ ಗುತ್ತಿಗೆದಾರನ ಮೇಲೆ ಕ್ರಿಮಿನಲ್ ಮೊಕದ್ದಮೆ ಹೊಡಬೇಕು. ಗುತ್ತಿಗೆದಾರರು ಬಿ.ಬಿ.ಎಂ.ಪಿಯ ಆಡಳಿತದ ನಿಯಂತ್ರಣದಲ್ಲಿ ಇಲ್ಲ ಎಂದು ಹೇಳಬಹುದು. ಒಂದು ಬಾರಿ ಗುತ್ತಿಗೆ ಪಡೆದರೆ ನಮ್ಮನ್ನು ಕೇಳುವವರಿಲ್ಲ ಎಂಬ ಭ್ರಮೆಯಲ್ಲಿ ಇವತ್ತು ಗುತ್ತಿಗೆದಾರರು ಇದ್ದಾರೆ. ಪ್ರಸ್ತುತ ಕೆಲಸ ನಡೆಯುವ ಜಾಗದಲ್ಲಿ ಅಧಿಕಾರಿಗಳು ಹೋಗಿ ವೀಕ್ಷಿಸುವುದಿಲ್ಲ. ಗುತ್ತಿಗೆದಾರರು ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿದ್ದಾರೆಯೇ ಎಂಬ ಗೋಜಿಗೆ ಆಡಳಿತ ವರ್ಗ ತಲೆಕೆಡಿಸಿಕೊಳ್ಳುವುದಿಲ್ಲ. ಈ ರೀತಿ ಅವೈಜ್ಞಾನಿಕವಾಗಿ ಮತ್ತು ಕಾನೂನುಬಾಹಿರವಾಗಿ ಗುತ್ತಿಗೆದಾರರು ವರ್ತಿಸುತ್ತಿರುವುದರಿಂದ ಕಾರ್ಮಿಕರ ಪ್ರಾಣಕ್ಕೆ ನಿರಂತರವಾಗಿ ಅಪಾಯ ಎದುರಾಗುತ್ತಿದೆ. ಇನ್ನೂ ಮುಂದೆ ಈ ರೀತಿಯ ದುರಂತಗಳು ನಡೆಯಬಾರದು ಎಂದು ಸರ್ಕಾರಕ್ಕೆ ಕಿಂಚಿತ್ತು ಕಾರ್ಮಿಕ ಕಾಳಜಿ ಇದ್ದರೆ ಪ್ರಸ್ತುತ ಈ ಪ್ರಕರಣದಲ್ಲಿ ಗುತ್ತಿಗೆದಾರರ ಜೊತೆ ಸಂಬಂಧ ಪಟ್ಟ ಅಧಿಕಾರಗಳ ವಿರುದ್ಧ ಸಹ ಕಾನೂನು ಕ್ರಮ ಜರುಗಿಸಬೇಕೆಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಎಸ್.ಡಿ.ಪಿ.ಐ ಪಕ್ಷದ ರಾಜ್ಯ ಕಾರ್ಯದರ್ಶಿಯಾದಂತಹ ರಿಯಾಝ್ ಫರಂಗಿಪೇಟೆರವರ ಆಗ್ರಹಿಸಿದ್ದಾರೆ.

ರಾಜ್ಯದಲ್ಲಿ 2008ರಿಂದ 2017 ಅವಧಿಯಲ್ಲಿ 59 ಮಂದಿ ಮ್ಯಾನ್‍ಹೋಲ್ ಶುಚಿತ್ವ ಎಂಬ ಅನಿಷ್ಟ ಹಾಗೂ ಅಮಾನವೀಯ ಪದ್ಧತಿಗೆ ಬಲಿಯಾಗಿದ್ದಾರೆ. ಈ ಸಂಬಂಧ ಹೈಕೋರ್ಟ್ ಸಹ ತನ್ನ ಆಕ್ರೋಷವನ್ನು ವ್ಯಕ್ತಪಡಿಸಿದೆ. ನಿಯಮಗಳನ್ನು ಉಲ್ಲಂಘನೆ ಮಾಡಿದ ಪಕ್ಷದಲ್ಲಿ ಅಧಿಕಾರಿಗಳನ್ನು ನೇರವಾಗಿ ಹೊಣೆಗಾರರನ್ನಾಗಿ ಮಾಡಿ ಅವರನ್ನು ಕೆಲಸದಿಂದ ವಜಾ ಮಾಡಬೇಕೆಂದು ಸ್ವತಃ ಹೈಕೋರ್ಟ್ ಹೇಳಿದೆ. ಆದುದರಿಂದ ಕರ್ನಾಟಕ ನಗರ ಸ್ಥಳೀಯ ಸಂಸ್ಥೆಗಳ ಒಳಚರಂಡಿ ಸುರಕ್ಷರಾ ಕೈಪಿಡಿ ಕರಡು-2012ನ್ನು ರಾಜ್ಯಾದಾದ್ಯಂತ ಕಟ್ಟು ನಿಟ್ಟಾಗಿ ಜಾರಿಗೆ ತರಬೇಕು ಹಾಗೂ ಪರಿಹಾರದೊಂದಿಗೆ ಕುಟುಂಬ ಸದಸ್ಯರೊಬ್ಬರಿಗೆ ಅನುಕಂಪದ ಅಧಾರದಲ್ಲಿ ಸರ್ಕಾರಿ ಉದ್ಯೋಗ ನೀಡಬೇಕೆಂದು ಎಸ್.ಡಿ.ಪಿ.ಐ ಆಗ್ರಹಿಸುತ್ತದೆ.

ಅಬ್ರಾರ್ ಅಹಮದ್
ರಾಜ್ಯ ಮಾಧ್ಯಮ ಉಸ್ತುವಾರಿ