• ನ್ಯಾಯ ಸಿಗುವವರೆಗೂ ಎಸ್.ಡಿ.ಪಿ.ಐ ಸಂತ್ರಸ್ತ ಕುಟುಂಬದ ಜೊತೆಗಿರುತ್ತದೆ: ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್

(ಕುಟುಂಬಕ್ಕೆ ವಿವಿಧ ಬೇಡಿಕೆಗಳನ್ನು ನೀಡುವಂತೆ ಸರಕಾರಕ್ಕೆ ಎಸ್.ಡಿ.ಪಿ.ಐ ಯಿಂದ ಒತ್ತಾಯ) ಕುಟುಂಬವನ್ನು ಭೇಟಿ ಮಾಡಿದ ಎಸ್.ಡಿ.ಪಿ.ಐ ನಿಯೋಗ
 
ಬೆಂಗಳೂರು. ಮಾ.31: ಚಾಮರಾಜನಗರ ಸಂತೆ ಮರಳಿ ತಾಲೂಕಿನಲ್ಲಿ ಮಾರ್ಚ್ 19ರಂದು ನಡೆದ ಇಬ್ಬರು ದಲಿತ ಕಾರ್ಮಿಕರಾದ ನಂಜಯ್ಯ ಹಾಗೂ ಕೃಷ್ಣಯ್ಯ ರವರ ನರಬಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿಯು ಸೋಮವಾರ(30.03.2015)ದಂದು ಕುಟುಂಬವನ್ನು ಭೇಟಿಮಾಡಿ, ಕುಟುಂಬಕ್ಕೆ ಸಾಂತ್ವಾನ ನೀಡಿ, ಕುಟುಂಬದ ಪರ ಕಾನೂನು ಹೋರಾಟದಲ್ಲಿ ಕುಟುಂಬಿಕರ ಜೊತೆಗಿರುತ್ತದೆ ಎಂದು ಸ್ಪಷ್ಟ ಪಡಿಸಿದೆ.
ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಎಸ್.ಡಿ.ಪಿ.ಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಕೊಡ್ಲಿಪೇಟೆ, ರಾಜ್ಯವೇ ಕಲೆತಗ್ಗಿಸುವಂತಹ ಪ್ರಕರಣವು ಇದಾಗಿದ್ದರೂ, ಪ್ರಕರಣ ಕಳೆದು 10 ದಿನಗಳು ಕಳೆದರೂ ಯಾವುದೇ ಅಧಿಕಾರಿಯು ಕುಟುಂಬವನ್ನು ಭೇಟಿಯಾಗದೆ ಸಾಂತ್ವಾನ ನೀಡದಿರುವುದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಅಧಿಕಾರಿಗಳ ವರ್ತನೆಗೆ ಖಂಡನೆ ವ್ಯಕ್ತಪಡಿಸಿದರು. ಬಡಜನತೆಯನ್ನು ದಲಿತರ ಹೆಸರಿನಲ್ಲಿ ಈ ರೀತಿಯ ಮೂಡನಂಬಿಕೆಯ ಹೆಸರಿನಲ್ಲಿ ಹತ್ಯೆಗೈಯ್ಯುತ್ತಿದ್ದರೂ ಸರಕಾರ ಇದುವರೆಗೂ ಎಚ್ಚೆತ್ತುಕೊಳ್ಳದ್ದು ನಾಚಿಕೆಯ ಸಂಗತಿಯಾಗಿದೆ. ದಲಿತರು ಎಂಬ ಏಕ ಕಾರಣಕ್ಕೆ ಪ್ರಕರಣವನ್ನು ಮುಚ್ಚಿ ಹಾಕಲು ವಿವಿಧ ರೀತಿಯ ಷಡ್ಯಂತ್ರಗಳು ನಡೆಯುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.  ಆದರೆ ಈ ಪ್ರಕರಣವನ್ನು ಮುಚ್ಚಿ ಹಾಕಲು ಎಸ್.ಡಿ.ಪಿ.ಐ ಬಿಡುವುದಿಲ್ಲವೆಂದು ಖಾರವಾಗಿ ನುಡಿದು ಕುಟುಂಬಕ್ಕೆ ಸೂಕ್ತ ನ್ಯಾಯ ಸಿಗುವವರೆಗೂ ಕುಟುಂಬದ ಜೊತೆ ನಿಲ್ಲಲಿದೆ ಎಂದು ಹೇಳಿದರು. ಇದುವರೆಗೂ ಕುಟುಂಬವನ್ನು ಭೇಟಿಯಾಗದ ಜಿಲ್ಲಾಡಳಿತದ ಕ್ರಮವನ್ನು ಈ ವೇಳೆ ಪ್ರಶ್ನಿಸಿದರು.
ನಂಜಯ್ಯ ಹಾಗೂ ಕೃಷ್ಣಯ್ಯ ರವರ ತಲೆಗಳನ್ನು ಕತ್ತರಿಸಿರುವುದರ ಹಿಂದೆ ಹಲವು ಸಂಶಯಗಳು ಹಾಗೂ ಅನುಮಾನವಿದೆ. ಈ ಬಗ್ಗೆ ಉನ್ನತ ತನಿಖೆಗಾಗಿ ಸರಕಾರವನ್ನು ಒತ್ತಾಯಿಸುತ್ತೇವೆ. ದೊಡ್ಡ ಮಟ್ಟದ ಪ್ರಕರಣವಾಗಿದ್ದರೂ ಯಾವುದೇ ಮಾಧ್ಯಮಗಳಲ್ಲಿ ಚರ್ಚೆಯಾಗದಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸಿದರು. ದೇಶಾದಾದ್ಯಂತ ನಿರಂತರ ದಲಿತರ ಮೇಲೆ ಹಲ್ಲೆ, ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ದಿನದಿಂದ ದಿನಕ್ಕೆ ಮಿತಿ ಮೀರುತ್ತಿದ್ದರೂ ಕಠಿಣ ಕ್ರಮಕೈಗೊಳ್ಳಬೇಕಾದ ಪೋಲಿಸ್ ಇಲಾಖೆ, ನ್ಯಾಯಾಂಗ ವ್ಯವಸ್ಥೆ ಹಾಗೂ ಸರಕಾರ ಈ ಬಗ್ಗೆ ಯಾವುದೇ ಕ್ರಮವನ್ನು ಪಡೆಯದಿರುವುದು ವಿಪರ್ಯಾಸವೇ ಸರಿ ಎಂದು ಪ್ರಕರಣವನ್ನು ತೀವ್ರವಾಗಿ ಖಂಡಿಸಿದರಲ್ಲದೇ, ಸರಕಾರಕ್ಕೆ ಕುಟುಂಬದ ಪರ ವಿವಿಧ ಬೇಡಿಕೆಯನ್ನಿಟ್ಟರು. 
ಚಾಮರಾಜನಗರ ನರಬಲಿ ಪ್ರಕರಣಕ್ಕೆ ಸಂಬಂಧಿಸಿ ಸರಕಾರಕ್ಕೆ ಸೋಶೀಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದ ಬೇಡಿಕೆ ಈ ಕೆಳಗಿನಂತಿವೆ.
1. ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಒಪ್ಪಿಸುವುದು. ಆರೋಪಿ ಹಾಗೂ ತಪ್ಪಿತಸ್ಥರ ಮೇಲೆ ಕಠಿಣ ಕಾನೂನು ಕ್ರಮವನ್ನು ಪಡೆಯುವುದು.
2. ನರಬಲಿಗೆ ತುತ್ತಾದ ಕೃಷ್ಣಯ್ಯ ಹಾಗೂ ನಂಜಯ್ಯ ರವರ ಕುಟುಂಬಕ್ಕೆ ತಲಾ 50ಲಕ್ಷ ಪರಿಹಾರ ಧನವನ್ನು ಅತೀ ಶೀಘ್ರದಲ್ಲಿ ನೀಡುವುದು.
3. ಎರಡೂ ಕುಟುಂಬದ ಒಬ್ಬ ಸದಸ್ಯನಿಗೆ ಸರಕಾರಿ ಉದ್ಯೋಗವನ್ನು ನೀಡುವುದು.
4. ಕುಟುಂಬಕ್ಕೆ ತಲಾ 3 ಎಕ್ರೆ ಭೂಮಿಯನ್ನು ನೀಡುವುದು.
ಕುಟುಂಬವನ್ನು ಭೇಟಿ ಮಾಡಿದ ನಿಯೋಗದಲ್ಲಿ ಎಸ್.ಡಿ.ಪಿ.ಐ ಚಾಮರಾಜನಗರಾಧ್ಯಕ್ಷ ಅಬ್ರಾಬ್ ಅಹ್ಮದ್, ನಗರ ಸಭಾ ಉಪಾಧ್ಯಕ್ಷೆ ಶ್ರೀಮತಿ ವಹಿದಾ ಖಾನಂ, ನಗರ ಸಭಾ ಸದಸ್ಯರಾದ ಮಹೇಶ್, ಡಾ.ಆರೀಫ್, ಸೆಯ್ಯೆದ್ ಇಮ್ರಾನ್, ಜಿಲ್ಲಾ ಉಪಾಧ್ಯಕ್ಷ ಸಮೀವುಲ್ಲಾ, ನಗರ ಸಮಿತಿ ಉಪಾಧ್ಯಕ್ಷ ಕಿಝಕ್ ಉಪಸ್ಥಿತರಿದ್ದು ಕುಟುಂಬದ ಅಹವಾಲನ್ನು ಸ್ವೀಕರಿಸಿದರು.